ದೇವಯಾನಿ -
ತನ್ನ ತಂದೆಯಲ್ಲಿ ವಿದ್ಯಾಭ್ಯಾಸ ಮಾಡಲು ಬಂದ ಬೃಯಸ್ಪತ್ಯಾಚಾರ್ಯನ ಮಗ ಕಚನನ್ನು ಮೋಹಿಸಿ ವಿಫಲಳಾಗುತ್ತಾಳೆ. (ನೋಡಿ- ಕಚ)

ಈ ಸಂದರ್ಭದಲ್ಲಿ ಆಶಾಭಂಗಗೊಂಡ ದೇವಯಾನಿ `ನನ್ನ ತಂದೆಯಿಂದ ಕಲಿತ ವಿದ್ಯೆ ಫಲಿಸದೆ ಹೋಗಲಿ ' ಎಂದು ಕಚನಿಗೆ ಶಪಿಸುತ್ತಾಳೆ. ಆಗ ಕಚನೂ ಅಧರ್ಮಕಾರ್ಯಕ್ಕೆ ಒತ್ತಾಯಿಸಿದ ಕಾರಣ `ಯಾವ ಬ್ರಾಹ್ಮಣನೂ ನಿನ್ನ ಮದುವೆಯಾಗದೆ ಹೋಗಲಿ ಎಂದು ಅವಳಿಗೆ ಮರುಶಾಪವನ್ನು ಹಾಕುತ್ತಾನೆ. ಹೀಗಾಗಿ ದೇವಯಾನಿ ಕ್ಷತ್ರಿಯನಾದ ಯಯಾತಿಯನ್ನು ಮದುವೆಯಾಗಬೇಕಾಗುತ್ತದೆ.

ರಾಕ್ಷಸರಾಜನಾದ ವೃಷಪರ್ವನ ಮಗಳು ಶರ್ಮಿಷ್ಠೆಗೂ ದೇವಯಾನಿಗೂ ಅಪಾರವಾದ ಗೆಳೆತನ. ಒಂದು ದಿನ ಇವರಿಬ್ಬರೂ ಜಲಕೇಳೀಯಾಡಲು ತಮ್ಮ ಉಡುಗೆಗಳನ್ನು ಕಳಚಿ ದಡದಲ್ಲಿಟ್ಟು ಕೊಳಕ್ಕಿಳಿಯುತ್ತಾರೆ. ಆಗ ಬಿರುಗಾಳಿ ಬೀಸಿ ಅವರ ಬಟ್ಟೆಬರೆಗಳು ಒಂದರಲ್ಲಿ ಮತ್ತೊಂದು ಬೆರೆತುಕೊಂಡುಬಿಡುತ್ತವೆ. ಸ್ನಾನ ಮಾಡಿ ಬಂದ ಶರ್ಮಿಷ್ಠೆ ದೇವಯಾನಿಯ ವಸ್ತ್ರವನ್ನು ತೊಟ್ಟುಕೊಂಡು ಬಿಡುತ್ತಾಳೆ. ಇದನ್ನು ನೋಡಿದ ದೇವಯಾನಿ ಕುಪಿತಳಾಗಿ ರಾಕ್ಷಸನ ಮಗಳು, ತನ್ನ ತಂದೆಯ ಶಿಷ್ಯನ ಮಗಳು, ತನ್ನ ಬಟ್ಟೆಯನ್ನು ಹಾಕಿಕೊಂಡಿರುವಳಲ್ಲ, ಇವಳಿಗೆಷ್ಟು ಸೊಕ್ಕು - ಎಂದು ಬಯ್ಯುತ್ತಾಳೆ. ಆಗ ಶರ್ಮಿಷ್ಠೆ ಹೆಡೆತುಳಿದ ನಾಗನಂತಾಗಿ ಭಿಕಾರಿಯ ಮಗಳು, ಹೊಗಳುಭಟ್ಟನ ಮಗಳು ಎಂದು ಬಯ್ದು ಅವಳ ಕಪಾಲಕ್ಕೆ ಬಾರಿಸಿ ಅಲ್ಲಿಯೇ ಇದ್ದ ಪಾಳು ಬಾವಿಗೆ ತಳ್ಳಿ ಹೊರಟು ಹೋಗುತ್ತಾಳೆ.

ನಹುಷ ಪುತ್ರನಾದ ಯಯಾತಿ ಬೇಟೆಗಾಗಿ ಬಂದವನು ನೀರಿಗಾಗಿ ಬಾವಿಯಲ್ಲಿ ಇಣಕಿ ತಾನು ಅಲ್ಲಿ ಕಂಡ ಸ್ತ್ರೀಯನ್ನು ಬದುಕಿಸುತ್ತಾನಲ್ಲದೆ ಆಕೆ ಶುಕ್ರಾಚಾರ್ಯನ ಮಗಳೆಂದು ತಿಳಿದು ಗೌರವಿಸುತ್ತಾನೆ. ಆಗ ದೇವಯಾನಿ ಕನ್ಯೆಯಾದ ನನ್ನ ಕೈ ಹಿಡಿದಿದ್ದೀಯೆ. ನನ್ನ ಮದುವೆಯಾಗು. ನನಗೆ ಯೋಗ್ಯನಾದ ಗಂಡ ನೀನು ಎಂದು ಯಯಾತಿಯನ್ನು ಕೇಳುತ್ತಾಳೆ. ಅದಕ್ಕೆ ಅವನು ಓ ಪ್ರಿಯಳೆ, ನೀನಾದರೊ ಲೋಕಪೂಜ್ಯನಾದ ಶುಕ್ರಾಚಾರ್ಯನ ಮಗಳು, ಬ್ರಾಹ್ಮಣ ಕನ್ಯೆ, ಕ್ಷತ್ರಿಯನನ್ನು ಮದುವೆಯಾಗುವುದು ಸಾಧ್ಯವೇ ? ಗೌರವಾನ್ವಿತಳೆ ಮನೆಗೆ ಹೋಗು ಎಂದು ಹೇಳಿ ಹೊರಟು ಹೋಗುತ್ತಾನೆ.

ದೇವಯಾನಿ ಮನೆಗೆ ಹೋಗದೆ ಶರ್ಮಿಷ್ಠೆಯ ವರ್ತನೆಯನ್ನು ನೆನೆದು ಅಲ್ಲಿಯೇ ಒಂದು ಮರದಡಿಯಲ್ಲಿ ಕುಳಿತುಬಿಡುತ್ತಾಳೆ. ತನ್ನನ್ನು ಹೀಯಾಳಿಸಿ ಕಪಾಲಕ್ಕೆ ಹೊಡೆದು ಬಾವಿಗೆ ತಳ್ಳಿದವಳ ತಂದೆಯ ರಾಜ್ಯದಲ್ಲಿ ಒಂದು ಕ್ಷಣವೂ ಇರಲಾರನೆಂದು ತೀರ್ಮಾನಿಸುತ್ತಾಳೆ. ತನ್ನ ಸಖಿಯ ಮೂಲಕ ತಂದೆಯನ್ನು ಬರಮಾಡಿಕೊಂಡು ಎಲ್ಲವನ್ನೂ ಹೇಳುತ್ತಾಳೆ. ಎಲ್ಲವನ್ನೂ ತಿಳಿದುಕೊಂಡ ಶುಕ್ರಾಚಾರ್ಯ ಮಗಳಿಗಿಷ್ಟವಿಲ್ಲದೆ ರಾಜ್ಯದಲ್ಲಿ ಒಂದು ಕ್ಷಣವೂ ಇರಲಾಗದೆಂದು ಹೇಳಿ ಹೊರಡುತ್ತಾನೆ. ಇದನ್ನು ತಿಳಿದ ವೃಷಪರ್ವ ಭೀತನಾಗಿ ದೇವಯಾನಿಯ ಹತ್ತಿರ ಬಂದು ಅವಳ ಇಷ್ಟಾರ್ಥವನ್ನು ನೆರೆವೇರಿಸಿಕೊಡುವುದಾಗಿ ಮಾತು ಕೊಡುತ್ತಾನೆ. ಆಗ ದೇವಯಾನಿ ಶರ್ಮಿಷ್ಠೆ ತನ್ನ ಆಜೀವಪರ್ಯಂತ ತನ್ನ ದಾಸಿ ಯಾಗುವುದಾದರೆ ನಗರಕ್ಕೆ ಕಾಲಿಡುತ್ತೇನೆ ಎಂದು ಹೇಳುತ್ತಾಳೆ. ವೃಷಪರ್ವ ಮಗಳನ್ನು ಕರೆಯಿಸುತ್ತಾನೆ. ವಂಶದ ರಕ್ಷಣೆಗಾಗಿ, ತಂದೆಯ ಕ್ಷೇಮಕ್ಕಾಗಿ ಅವಳು ದೇವಯಾನಿಯ ದಾಸಿಯಾಗಲು ಒಪ್ಪುತ್ತಾಳೆ. ಅನಂತರ ದೇವಯಾನಿ ಶರ್ಮಿಷ್ಠೆಯನ್ನು ಬಗೆ ಬಗೆಯಾಗಿ ಹೀಯಾಳಿಸುತ್ತ ಪಟ್ಟಣವನ್ನು ಪ್ರವೇಶಿಸುತ್ತಾಳೆ.

ಕೆಲವು ಕಾಲನಂತರ ಶುಕ್ರಾಚಾರ್ಯರ ಮಾತಿಗೆ ಒಪ್ಪಿ ಯಯಾತಿ ದೇವಯಾನಿಯನ್ನು ವರಿಸುತ್ತಾನೆ ದೇವಯಾನಿ ತನ್ನ ದಾಸಿ ಶರ್ಮಿಷ್ಠೆಯೊಡಗೂಡಿ ಗಂಡನ ಮನೆ ಸೇರುತ್ತಾಳೆ. ದೇವಯಾನಿಗೆ ಯದು, ತುರ್ವಸು, ಎಂಬ ಇಬ್ಬರು ಮಕ್ಕಳೂ ಆಗುತ್ತಾರೆ. ಶರ್ಮಿಷ್ಠೆ ಗುಟ್ಟಾಗಿ ಯಯಾತಿಯನ್ನು ಮದುವೆಯಾಗಿ ದ್ರುಹ, ಅನು, ಮತ್ತು ಪುರು ಎಂಬ ಮೂವರು ಪುತ್ರರನ್ನು ಪಡೆಯುತ್ತಾಳೆ. ಇದನ್ನು ತಿಳಿದ ದೇವಯಾನಿ ರೋಷಭರಿತೆಯಾಗಿ ತಂದೆಯ ಬಳಿ ದೂರು ಹೇಳುತ್ತಾಳೆ. ಎಲ್ಲವನ್ನೂ ತಿಳಿದು ಕುಪಿತಗೊಂಡ ಶುಕ್ರಾಚಾರ್ಯ ಅಳಿಯನಿಗೆ ಮುದಿತನ ಬರಲಿ ಎಂದು ಶಾಪ ಹಾಕುತ್ತಾನೆ. ಯಯಾತಿಯ ಯೌವ್ವನ ಒಡನೆಯೇ ಬತ್ತಿಹೋಗಿ ಮುದಿತನ ಆವರಿಸುತ್ತದೆ. ತನಗೊದಗಿದ ಶಾಪವನ್ನು ಹೋಗಲಾಡಿಸಲು ಮಾವನನ್ನು ಬೇಡುತ್ತಾನೆ. ಆಗ ಶುಕ್ರಾಚಾರ್ಯರು ಕನಿಕರಿಸಿ ನಿನಗೆ ಯೌವನಾಭಿಲಾಷೆಯಿದ್ದಲ್ಲಿ ನಿನ್ನ ಈ ಮುದಿತನವನ್ನು ಯಾರಿಗಾದರೂ ಕೊಟ್ಟು ತಾರುಣ್ಯವನ್ನು ಪಡೆ ಎಂದು ಉಪಾಯವನ್ನು ಸೂಚಿಸುತ್ತಾನೆ.

ಕಿರಿಯವನಾದ ಪುರು ತಂದೆಯ ಮಾತಿಗೆ ಒಪ್ಪಿ ತನ್ನ ಯೌವನವನ್ನು ಕೊಟ್ಟು ಮುದಿತನವನ್ನು ಪಡೆದುಕೊಳ್ಳುತ್ತಾನೆ. ಮುದಿತನವನ್ನು ಕಳೆದುಕೊಂಡು ಯುವಕನಾದ ಯಯಾತಿ ಕೆಲಕಾಲಾನಂತರ ಜೀವನದಲ್ಲಿ ಬೇಸರಪಟ್ಟು ಮಗನಿಂದ ಮತ್ತೆ ತನ್ನ ಮುದಿತನವನ್ನು ಪಡೆದು ದೇವಯಾನಿಯೊಡನೆ ವನಕ್ಕೆ ತೆರಳುತ್ತಾನೆ.																		(ಡಿ.ಎನ್.ಆರ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ